ಕನ್ನಡ ಸಾಹಿತ್ಯಕ್ಕೆ ಜಗತ್ತಿನ ಹಲವು ಸಾಹಿತ್ಯ ಪರಂಪರೆಗಳ ಪ್ರಭಾವವಿದೆ. ಸುಮಾರು 2000 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಪ್ರಾರಂಭದಲ್ಲಿ ಪ್ರಾಕೃತ ಮತ್ತು ಸಂಸ್ಕೃತ ಭಾಷೆಗಳನ್ನು ಅರಗಿಸಿಕೊಂಡು ಬೆಳೆದಿದೆ. ಆಧುನಿಕ ಕಾಲದಲ್ಲಿ ಜಾಗತಿಕ ಸಂವಹನ ಭಾಷೆಯಾದ ಇಂಗ್ಲೀಷಿನಿಂದ ಹೆಚ್ಚು ಪ್ರಭಾವಕ್ಕೆ ಒಳಗಾಗಿ ಬೆಳೆಯುತ್ತಿದೆ. ಪಂಪನಿಂದ ಇಲ್ಲಿಯವರೆಗೆ ಕನ್ನಡ ಸಾಹಿತ್ಯ ಎಂದೂ ಜಡವಾಗದೆ ಪ್ರಚಲಿತಕ್ಕೆ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ನಿರಂತರ ಪರಿವರ್ತನಶೀಲವಾಗಿ ಕಂಗೊಳಿಸುತ್ತಿದೆ. ಪ್ರಾರಂಭದಲ್ಲಿ ರಾಜಾಶ್ರಯದಲ್ಲಿ ಮಿಂಚಿ, ಆನಂತರ ಸಾಮಾಜಿಕ, ಧಾರ್ಮಿಕ ಚಳುವಳಿಯಲ್ಲಿ ಆರ್ಭಟಿಸಿ, ಆಧುನಿಕ ಯುಗದಲ್ಲಿ ನವಯುಗವನ್ನು ಕಟ್ಟಿ ನವ್ಯದಲ್ಲಿ ತೊಳಲಾಡಿ ದಲಿತ ಬಂಡಾಯ ಕಾಲದಲ್ಲಿ ವಸಾಹತು ಜಗತ್ತಿಗೆ ಪರಿಣಾಮಕಾರಿಯಾಗಿ ಸಿಡಿದೆದ್ದ ಸಾಹಿತ್ಯ ನಮ್ಮ ಕನ್ನಡ ಸಾಹಿತ್ಯ. ಇದನ್ನು ಕುರಿತು ಎಷ್ಟು ಅಧ್ಯಯನ ಮಾಡಿದರೂ ಮುಗಿಯದಷ್ಟು ವಾದಗಳು, ಪರಿಕಲ್ಪನೆಗಳು ಈ ಸಾಹಿತ್ಯದಲ್ಲಿವೆ. ಇವುಗಳ ಅನ್ವೇಷಣೆ, ವಿಶ್ಲೇಷಣೆಗಳೇ ಈ ಪ್ರಬಂಧದ ತಿರುಳಾಗಿದೆ. ಕನ್ನಡ ಸಾಹಿತ್ಯವು ಪುರಾತನ ಕಾಲದಿಂದ ಆಧುನಿಕ ಯುಗದವರೆಗೆ ವಿವಿಧ ಹಂತಗಳನ್ನು ದಾಟಿ ಬಂದಿರುವ ಜೀವಂತ ಪರಂಪರೆಯಾಗಿದೆ. ಈ ಪರಂಪರೆಯ ಅಧ್ಯಯನದಲ್ಲಿ ಕೆಲವೇ ಕೆಲವು ಸಾಹಿತ್ಯಕಾರರು ಪರಂಪರೆಯನ್ನು ಕೇವಲ ಇತಿಹಾಸವಾಗಿ ಅಲ್ಲ, ಸಾಮಾಜಿಕ ಚಲನೆಗಳ ಜೀವಂತ ದಾಖಲೆಗಳಾಗಿ ವಿಶ್ಲೇಷಿಸಿದ್ದಾರೆ. ಅಂತಹ ಪ್ರಮುಖ ಚಿಂತಕರಲ್ಲಿ ಎಸ್. ವೀರಣ್ಣ ಪ್ರಮುಖರು. ಅವರ ಸಾಹಿತ್ಯಿಕ ಬದುಕು ಸಂಶೋಧನೆ, ವಿಮರ್ಶೆ ಮತ್ತು ಸೃಜನಶೀಲತೆಯ ಸಮನ್ವಯವಾಗಿದೆ.
B E SHIVARAJAKUMARA (Sun,) studied this question.