ಕನ್ನಡದಲ್ಲಿ ಪಂಪನಿಂದ ಪ್ರಾರಂಭಿಸಿ ಏ.ಆರ್ ಕೃಷ್ಣಶಾಸ್ತ್ರಿಗಳ ತನಕ ಮಹಾಭಾರತ ವನ್ನು ಕನ್ನಡಿಸಿದವರು ಅನೇಕರು. ಆದರೆ ಇವುಗಳಲ್ಲಿ ಪಂಪನ ‘ವಿಕ್ರಮಾರ್ಜುನ ವಿಜಯ’ ರನ್ನನ ‘ಸಾಹಸಭೀಮ ವಿಜಯ’ ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ’ ಲಕ್ಷ್ಮೀಶನ ‘ಜೈಮಿನಿ ಭಾರತ’ ಈ ನಾಲ್ಕು ಕೃತಿಗಳು ವಿಭಿನ್ನ ಕಾಲಗಳಲ್ಲಿ ರಚಿತವಾಗಿರುವ ಕನ್ನಡದ ಸ್ವತಂತ್ರ ಭಾರತಗಳಾಗಿವೆ. ಪಂಪ ಅರ್ಜುನನ್ನು (ಅರಿಕೇಸರಿಯನ್ನು) ನಾಯಕನನ್ನಾಗಿ ಮಾಡಿಕೊಂಡಾಗಲೇ ಹಲವು ಬದಲಾವಣೆಗಳನ್ನು ಮಾಡಿಕೊಂಡಿರುವುದನ್ನು, ರನ್ನ ಸಹ ಭೀಮ(ಇರಿವಬೆಡಂಗ)ನನ್ನು ನಾಯಕನನ್ನಾಗಿ ಮಾಡಿಕೊಳ್ಳುವಲ್ಲಿ ಅನುಸರಿಸಿದ್ದಾನೆ. ನಂತರದಲ್ಲಿ ಮಹಾಭಾರತವನ್ನು ಷಟ್ಪದಿಯ ರೂಪದಲ್ಲಿ ಕನ್ನಡದಲ್ಲಿ ರಚಿಸುವ ಸವಾಲನ್ನು ಸ್ವೀಕರಿಸಿದ್ದು ಕುಮಾರವ್ಯಾಸನೇ. ಹತ್ತು, ಹನ್ನೊಂದನೇ ಶತಮಾನದ ಕರ್ನಾಟಕ ರಾಜಕೀಯ, ಸಾಮಾಜಿಕ ಚರಿತ್ರೆಯನ್ನು ಪಂಪನ ಕಾವ್ಯಗಳ ಮೂಲಕ ಅಧ್ಯಯನ ಮಾಡಲು ಸಾಧ್ಯವಾದರೆ, ಹದಿನೈದನೆಯ ಶತಮಾನದ ರಾಜಕೀಯ ಸಾಮಾಜಿಕ ಪ್ರವೃತ್ತಿಗಳನ್ನು ಕುಮಾರವಾಸನ ಭಾರತ ದಾಖಲಿಸಿರುವುದನ್ನು ಗಮನಿಸುತ್ತೇವೆ. ಕರ್ನಾಟಕ ಚರಿತ್ರೆಯಲ್ಲಿ ಪ್ರಭುತ್ವವೇ ಮುಖ್ಯವಾಗಿ,ಆಳಾಗಿ ಬಾಳಿದ ಸಾಮಾನ್ಯ ಮನುಷ್ಯನ ಬದುಕು ಮುಖ್ಯವಾಗದ ಸ್ಥಿತಿಯನ್ನು ಕುಮಾರವ್ಯಾಸನ ಭಾರತವೂ ಹೇಳುತ್ತದೆ. ಹನ್ನೊಂದು, ಹನ್ನರಡನೆ ಶತಮಾನದಲ್ಲಿ ನಡೆದ ವಚನಕಾರರ ಪ್ರಯತ್ನಗಳಿಗೆ 13ನೇ ಶತಮಾನದ ಹರಿಹರನೊಬ್ಬನ ರಗಳೆರೂಪದ ಪ್ರತಿಕ್ರಿಯೆಗಳಿಗೆ ಮತ್ತು ವೈಫಲ್ಯಗಳಿಗೆ ಕಾರಣಗಳನ್ನು ಕುಮಾರವ್ಯಾಸನ ಭಾರತ ಮೂರ್ತರೂಪದಲ್ಲಿ ತೋರಿಸುತ್ತದೆ. ರಾಜಕೀಯ ಚರಿತ್ರೆಯೊಂದೇ ಆಯಾ ಕಾಲದ ಎಲ್ಲ ಕವಿಗಳ ಮೇಲೂ ಹೇರಿ ಬಂದ ಒತ್ತಡವೆನ್ನುವುದನ್ನು ಗಮನಿಸಿದರೆ ವಚನಕಾರರ ಹೋರಾಟದ ಮಿತಿಗಳೂ ಅರ್ಥವಾಗುತ್ತದೆ. ಬಹಳ ಮಟ್ಟಿಗೆ ವಚನಕಾರರಲ್ಲಿ ಹೆಣ್ಣು ಮಾಯೆಯಾಗಿ ವ್ಯಕ್ತವಾಗುತ್ತಾಳೆ. ‘ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ. ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ. ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ ಮನದ ಮುಂದಣ ಆಸೆಯೇ ಮಾಯೆ’ ಎಂದು ಜೇಡರ ದಾಸಿಮಯ್ಯನಲ್ಲಿ ವ್ಯಕ್ತವಾದರೂ ಕೂಡ ಉಳಿದ ವಚನಕಾರರಿಗೆ ಹೆಣ್ಣು ಸಂಸಾರದ ಮೂಲಕ ಸಾಮಾಜಿಕ ಸಂಬಂಧಗಳ ಮೂಲಕ ಮನುಷ್ಯನ ಎಲ್ಲಾ ಕಾಮನೆಗಳಿಗೆ ಸ್ತ್ರೀ ರೂಪದ ಮಾಯೆಯನ್ನೇ ಕಾರಣವಾಗಿ ಕಂಡಿದೆ. ಹರಿಹರ ಶಿವಭಕ್ತರ ರಗಳೆಗಳಲ್ಲಿಯೇ ಕಾಲಕಳೆದರೆ ರಾಘವಾಂಕ ರಾಜನಾದ ಹರಿಶ್ಚಂದ್ರನನ್ನೇ ನಾಯಕನನ್ನಾಗಿ ಮಾಡಿಕೊಳ್ಳುತ್ತಾನೆ. ಜನ್ನ ಮಾನವ ಸಂಬಂಧಗಳ ಅನೇಕ ರೂಪಗಳನ್ನು ಬಿಚ್ಚುತ್ತಾ ಜೈನ ಸಂಸ್ಕøತಿಯ ಅವನತಿಯ ಚಿತ್ರಣದಲ್ಲಿ ಒದ್ದಾಡಬೇಕಾಗುತ್ತದೆ. ಕುಮಾರವ್ಯಾಸ ಸಹ ಈ ನೆಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ದ್ರೌಪದಿ ತನ್ನ ಗಂಡಂದಿರ ಅಸ್ತಿತ್ವವನ್ನೇ ಪ್ರಶ್ನಿಸುವ ದಿಟ್ಟೆಯಾದರೂ ಸಹ ಇಡೀ ಸಮಾಜ ಒಟ್ಟಾಗಿ ಸ್ರ್ತೀಯನ್ನು ನಡೆಸಿಕೊಂಡಿರುವ ರೀತಿಯನ್ನು ಗಮನಿಸಿದರೆ ಇದು ತಿಳಿಯುತ್ತದೆ. ಪ್ರಭುತ್ವದ ಉತ್ತರಾಧಿಕಾರದ ಸಮಸ್ಯೆಯನ್ನು ತೊಡೆಯಲು, ವಿರಹಿಗಳಾದ ರಾಜರುಗಳ ಶೃಂಗಾರವನ್ನು ಮೆರೆಯಲು ಮತ್ತು ಅವರ ಆಸ್ತಿಯಾಗಿ ಉಳಿಉಲು ಹೆಣ್ಣು ಇಲ್ಲಿ ಮುಖ್ಯವಾಗುತ್ತಾಳೆ. ಇಲ್ಲಿನ ಧುರ್ಯೋಧನ ಕಾಡಿನಲ್ಲಿರುವ ಪಾಂಡವರ ಎದುರಿಗೆ ಐಶ್ವರ್ಯವನ್ನು ಮೆರೆಯಲು, ಆ ಮೂಲಕ ಅವರಲ್ಲಿ ಕಿಚ್ಚನ್ನು ಹುಟ್ಟಿಸಲು ಬಳಸುವ ತಂತ್ರಗಳಲ್ಲಿ ದಾಸವರ್ಗದ ಹೆಣ್ಣುಗಳನ್ನು ಸ್ವೇಚ್ಛಾ ವಿಹಾರಿಗಳನ್ನಾಗಿ ಬಳಸುತ್ತಾನೆ. ಇಡೀ ಒಂದು ಸಂಧಿಯೇ ಇದಕ್ಕೆ ಮೀಸಲು ಕುಮಾರವ್ಯಾಸನಲ್ಲಿ. ಸಂತಾನ ಕಾರಣವೂ ಸೇರಿದಂತೆ ಗಂಡಿನ ಆಳ್ವಿಕೆಯ ಮನೋಭಾವದ ಸ್ವೇಚ್ಛಾ ಪ್ರವೃತ್ತಿಯ ಬಲಿಯಾಗಿಯೇ ಕುಮಾರವ್ಯಾಸ ಭಾರತದಲ್ಲಿ ಹೆಣ್ಣು ಕಾಣುತ್ತಾಳೆ. ಅವಳಿಗೆ ಈ ಕಾವ್ಯಗಳ ಮೂಲಕ ಆರೋಪಿಸುತ್ತಾ ಹೋಗುವುದು ವ್ಯಾಖ್ಯಾನದ ಸರಳೀಕರಣವಲ್ಲದೇ ಬೇರೆಯಲ್ಲ. ಮತ್ತು ಮುಂದುವರೆದು ಹೇಳಬಹುದೆಂದರೆ ಗಂಡನ್ನು ಕಳೆದುಕೊಂದ(ರಾಜನನ್ನು ಕಳೆದುಕೊಂಡ) ಹೆಣ್ಣುಗಳು ಮಾತ್ರ ಸಂಸಾರ ಮತ್ತು ರಾಜಕೀಯ ಇವೆರಡರಲ್ಲೂ ಮುಂದಾಳಾಗಿ ಪ್ರವೇಶಿಸಲು ಸಾಧ್ಯ ಆದರೆ ಈ ಮುಂದಾಳುತನ ಸಹ ವಂಶವನ್ನು ಮತ್ತು ಉತ್ತರಾಧಿಕಾರವನ್ನು ಮುಂದುವರೆಸುವ ಗಂಡು ಮಕ್ಕಳ ಪೋಷಣೆಯಲ್ಲಿಯೇ ಮತ್ತೆ ಪರ್ಯಾವಸಾನಗೊಳ್ಳುತ್ತದೆ. ಆಕ್ರಮಣ ಸಹ ಗಂಡಿನ ಮೂಲಭೂತ ಗುಣಗಳಲ್ಲಿ ಒಂದು. ಆತನನ್ನುಳಿದ ಮಿಕ್ಕೆಲ್ಲವನ್ನೂ ಆಸ್ತಿಯಾಗಿ ಭಾವಿಸುವ ಗಂಡು ತನ್ನ ಆಸ್ತಿಯನ್ನು ಸ್ವೇಚ್ಛೆಯಾಗಿ ನಡೆಸಿಕೊಳ್ಳುವುದು ಒಂದು ಕಡೆಯಾದರೆ, ಇನ್ನೊಂದು ಕಡೆಗೆ ತನ್ನ ಆಸ್ತಿಯಲ್ಲದರ ಮೇಲೆ ಆಕ್ರಮಣ ನಡೆಸಿ ಸ್ವಆಸ್ತಿಯನ್ನಾಗಿ ಮಾಡಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಾನೆ. ಗಂಡಿಗೆ ಆಸ್ತಿಯಾಗಿಯೇ ಪರಿಣಮಿಸಿದ ಹೆಣ್ಣು ಸಹ ಈ ಆಕ್ರಮಣದ ಪ್ರವೃತ್ತಿಯಿಂದ ಹೊರಗುಳಿಯುವುದು ಸಾಧ್ಯವಿಲ್ಲ. ಕೀಚಕ ಮತ್ತು ಸೈಂಧವರ ದ್ರೌಪದಿಯ ಮೇಲಿನ ವರ್ತನೆಗಳು, ಭೀಷ್ಮ ನಡೆಸುವ ಅಂಬೆ, ಅಂಬಿಕೆಯರ ಮೇಲಿನ ದೌರ್ಜನ್ಯ ಇದನ್ನು ಸಾರುತ್ತವೆ. ಕೌರವ ಮತ್ತು ಪಾಂಡವರ ಭೂಮಿಯ ಮೇಲಿನ ಬಯಕೆಯ ಆಕ್ರಮಣದೊಂದಿಗೆ ಈ ಅಂಶವನ್ನು ಯೋಚಿಸಬೇಕು. ಹೆಣ್ಣು ಮಾಯೆಯಾಗಿ,ಗಂಡಿನ ವೈಭವ ಜೀವನದ ಸಂಪತ್ತಾಗಿ,ಅವನ ಆಕ್ರಮಣದ ಆಸ್ತಿಯಾಗಿ,ಅವನ ವಿರಹ ಜೀವನದ ಶೃಂಗಾರವಾಗಿ ಅವಳ ಅಸ್ತಿತ್ವವನ್ನು ಅಲಂಕರಿಸಿಕೊಳ್ಳಬೇಕಾಗಿದ್ದು ಮಾನವ ಬದುಕಿನ ಚರಿತ್ರೆಯಲ್ಲಿನ ಮೊದಲ ದುರಂತ. ನಮ್ಮ ಇಡೀ ಸಮಾಜ ವ್ಯವಸ್ಥೆಯ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಬೋಳೆತನಗಳಿಗೆ ಕಾರಣಗಳು ಗಂಡಸೇ ಬರೆದ ನಮ್ಮ ಚರಿತ್ರೆಗಳಲ್ಲಿದೆ. ನಮ್ಮ ಜೀವನ ಕ್ರಮಗಳಲ್ಲೇ ಇದೆ. ಗಂಡನ್ನು ಸಮಾಜ -ಸಂಸಾರ ವಿಮುಖನನ್ನಾಗಿ ಮಾಡುವ ನಶ್ವರ ರೂಪವಾಗಿಯೂ ಹೆಣ್ಣನ್ನು ಗಮನಿಸಿರುವ, ಅದನ್ನು ಉತ್ಪ್ರೇಕ್ಷಿಸಿರುವ ನಮ್ಮ ಸಾಂಸ್ಕ್ರತಿಕ ಚರಿತ್ರೆ ಅದನ್ನು ಸ್ಪಷ್ಟಪಡಿಸುತ್ತದೆ. ಇಂಥ ಗ್ರಹಿಕೆಗಳ ಹಿನ್ನೆಲೆಯಲ್ಲಿ ಕುಮಾರವ್ಯಾಸ ಭಾರತವನ್ನು ಮುಂದೆ ನೋಡಲಾಗಿದೆ. ಸ್ತ್ರೀವಾದಿ ದೃಷ್ಟಿಯಿಂದ ಮಹಾಪ್ರಬಂಧಕ್ಕಾಗುವಷ್ಟು ಸ್ತ್ರೀ ಕಥೆಯನ್ನು ಕೃತಿ ಒಳಗೊಂಡಿದೆ. ಅಂಥ ಹೊಳಹುಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ಈ ಪ್ರಬಂಧದ ಮೂಲಕ ಮಾಡಲಾಗಿದೆ. ತಿಳಿಯ ಹೇಳುವೆ ಕೃಷ್ಣ ಕಥೆಯನು ಇಳೆಯ ಜಾಣರು ಮೆಚ್ಚುವಂತಿರೆ ನೆಲೆಗೆ ಪಂಚಮ ಶೃತಿಯನೊರೆವೆನು ಕೃಷ್ಣ ಮೆಚ್ಚಲಿಕೆ ಹಲವು ಜನ್ಮದ ಪಾಪರಾಶಿಯ ತೊಳೆವ ಜಲವಿದು ಶ್ರೀಮದಾಗಮ ಕುಲಕೆ ನಾಯಕ ಭಾರತಾಕೃತಿ ಪಂಚಮಶೃತಿಯ (ಆದಿಪರ್ವ:1-12) ತಾಯಿಯಾಗಿ, ಹೆಂಡತಿಯಾಗಿ, ಸೂಳೆಯಾಗಿ, ಸೇವಕಿಯಾಗಿ, ದಾಸಿಯಾಗಿ, ರೂಪಸಿಯಾಗಿ, ರಾಕ್ಷಸಿಯಾಗಿ, ವಿಜಯಾಂಗನೆಯಾಗಿ, ವಿರಹದ ದೇವತೆಯಾಗಿ, ಆಸ್ತಿಯಾಗಿ,ಹೇಗೆ ಹೆಣ್ಣಿನ ಅನೇಕ ಮಾದರಿಗಳನ್ನು ಕರ್ನಾಟಕ ಭಾರತ ಕಥಾಮಂಜರಿಯಲ್ಲಿ ಕುಮಾರವ್ಯಾಸ ದಾಖಲಿಸುತ್ತಾನೆ. ಶಾಪಿತ ಗಂಗೆಯ ‘ಏಳು ಮಕ್ಕಳ ಹತ್ಯೆಯಿಂದ ಪ್ರಾರಂಭವಾಗಿ ನೂರೊಂದು ಜನ ಮಕ್ಕಳನ್ನು ಕಳೆದುಕೊಂಡ ಗೋಳಿನ ಗಾಂಧಾರಿಯತನಕ ಸ್ತ್ರೀ ಬಗೆಗಿನ ಆಲೋಚನೆಗಳೆಲ್ಲ ಗಂಡು ಮಕ್ಕಳ ಕಾರಣದಿಂದಲೇ ಸೃಷ್ಟಿಯಾಗಿ ಅವರ ನಾಶದಿಂದಲೇ ಪರ್ಯಾವಸಾನ ಗೊಳ್ಳುತ್ತವೆ. ಈ ಆಲೋಚನೆಗಳನ್ನು ಎರಡು ಬಗೆಯಲ್ಲಿ ಚರ್ಚಿಸಲು ಸಾಧ್ಯ. ಇಡೀ ಕೃತಿಯಲ್ಲಿ ನಡೆಯುವ ಘಟನೆಗಳ ಮೂಲಕ ಸ್ತ್ರೀಯನ್ನು ನೋಡುವುದು. ನೀತಿಗಳ ಮೂಲಕ ಆಕೆಯನ್ನು ವ್ಯಾಖ್ಯಾನಿಸಿರುವುದು. ಗಂಡು ತನ್ನ ಜೀವನ ಸಂದರ್ಭದ ಇಕ್ಕಟ್ಟುಗಳಲ್ಲಿ ಸಿಕ್ಕಿಕೊಂಡಾಗಲೆಲ್ಲ ಧರ್ಮ ಸೂಕ್ಷ್ಮದ ಚರ್ಚೆಗಳು, ಆ ಇಕ್ಕಟ್ಟಿನಿಂದ ಪಾರಾಗಲು ಹೋದಾಗ ನೀತಿಗಳು ತಾನೇ ತಾನಾಗಿ ಹುಟ್ಟಿಕೊಳ್ಳುತ್ತವೆ. ಅದು ವ್ಯಾಸನ ರೂಪದಲ್ಲಿರಬಹುದು. ಅಥವಾ ಮಾರ್ಕಂಡೇಯನ ರೂಪದಲ್ಲಿರಬಹುದು. ನಾರದನ ರೂಪದಲ್ಲಿರಬಹುದು. ಅಥವಾ ಕೃಷ್ಣ ಧರ್ಮಜರ ರೂಪದಲ್ಲಿರಬಹುದು. ಈ ನೀತಿಗಳು ಪ್ರಾಸಂಗಿಕವಾಗಿ ಮುಖ್ಯ ಕಥಾ ಪಾತ್ರಗಳಿಂದ ಪುರುಷರಿಗೇ ಒದಗಿ ಬರುತ್ತವೆ. ಆದರೆ ತನ್ನ ದಾಸತ್ವವನ್ನು ಪ್ರಶ್ನಿಸುವ ದ್ರೌಪದಿಗೆ, ತನ್ನ ಇಚ್ಚೆಯನ್ನು ಮನ್ನಿಸಬೇಕೆಂದು ಕೇಳಿಕೊಳ್ಳುವ ಅಂಬೆ ಊರ್ವಶಿಯರಿಗೆ ಸಹಾಯಕ್ಕೆ ಬರುವುದಿಲ್ಲ. ಇದರ ಮತ್ತೊಂದು ಆಯಾಮವನ್ನು ಗುರುತಿಸಬಹುದಾದರೆ ಕುಂತಿ,ಮಾದ್ರಿ, ಗಾಂಧಾರಿ, ಸತ್ಯವತಿ, ಅಂಬಿಕೆ ಅಂಬಾಲಿಕೆ ಇವರ ಸಂಕಟಗಳಿಗೆ ಸಹಾಯಕವಾಗಿ ಪರಿವರ್ತಿತವಾಗುವುದು ಗಂಡಿನ ನಿರ್ದೇಶನಗಳೇ ಹೊರತು ಯಾವ ಸ್ವತಂತ್ರಾಲೋಚನೆಗೂ ಇಲ್ಲಿ ಅವಕಾಶವಿರುವುದಿಲ್ಲ. ‘ಸುತರು ... ಅನ್ಯಥಾ ಸಂಭವಿಸಿದರೆ ದುಷ್ಕೀರ್ತಿವಧುವೆಂಜಲಿಸಳೇ ಕುಲವ ...’ಎನ್ನುವ ಕುಂತಿಯ ಮಾತು ಸಹ ಪುರುಷ ಜಗತ್ತಿನ ಭಯದಿಂದ ಬಂದದ್ದೇ ಆಗಿದೆ. ಆದ್ದರಿಂದಲೇ ಇಲ್ಲಿನ ಒಟ್ಟು ನಾರಿಯ ಸ್ಥಿತಿಯನ್ನು ಗ್ರಹಿಸಿದಾಗ ಭೀಷ್ಮನ ಪ್ರತಿಜ್ಞೆ ‘ನಾರಿಯರಾದವರು ಭಾಗೀರಥಿಗೆ ಸರಿ’ ಯಾವ ಪ್ರಯೋಜನಕ್ಕೂ ಬರದ ವೈಯಕ್ತಿಕ ಆದರ್ಶವಾಗಿ ಮಾತ್ರ ಕಾಣುತ್ತದೆ. ಭೀಷ್ಮ ತನಗಾಗಿ ಹೆಣ್ಣನ್ನು ತಿರಸ್ಕರಿಸುವುದು ನಿಜವಾದರೂ, ಸತ್ಯವತಿಯನ್ನು ತಂದು ಶಂತನ ವಿರಹದ ಕಿಚ್ಚನ್ನು ನಂದಿಸಿದರೂ, ಅಂಬೆ,ಅಂಬಿಕೆ, ಅಂಬಾಲಿಕೆಯರನ್ನು ವಿವಾಹ ಮಂಟಪದಿಂದ ಎಳೆದು ತರುವ ಮತ್ತು ಅವರು ನೃಪನಾದ ವಿಚಿತ್ರವೀರ್ಯನನ್ನು ರಮಿಸುವಂತೆ ಮಾಡುವ ಕ್ರೌರ್ಯ, ಅವನ ತ್ಯಾಗವನ್ನು ವ್ಯಂಗ್ಯವಾಡುತ್ತದೆ. ಪರಶುರಾಮ ‘ನುಡಿಯ ಮೀರದ ನಮ್ಮ ಶಿಷ್ಯನನೊಡಬಡಿಸಿ ಕೊಳ್ಳೆಂದು’ ಅಂಬೆಗೆ ಹೇಳುವುದರ ಮೂಲಕ ಭೀಷ್ಮನ ತ್ಯಾಗವನ್ನು ಕೀರ್ತಿಸಿದರೂ ಅವನ ಈ ತ್ಯಾಗ ಭರತವಂಶದ ಸೂತ್ರಧಾರತ್ವವನ್ನು ವಹಿಸಿ ಸೋಮವಂಶದ ಬೆಳವಿಗೆಯನ್ನು ಮಾಡಿ ಕೊಂಡಾಡಿದರೂ, ಭೀಷ್ಮ ಅನಂರೆ ಗೌಣವಾಗುತ್ತಾನೆ. ಅವರಿಬ್ಬರ ರಾಜ್ಯಾಧಿಕಾರದ ವ್ಯಾಜ್ಯದಲ್ಲಿ ಪರಿಹಾರವಿಲ್ಲದ ಸಲಹೆಗಾರನಾಗುತ್ತಾನೆ. ಇರಾವತಿ ಕರ್ವೆಯವರು ಹೇಳುವಂತೆ “ ಕುರುವಂಶದಲ್ಲಿ ಹೆಂಗಸರ ಮಾನಹಾನಿ ಅತಿಶಯವಾಯಿತು ಅವರ ದೇಹ ಮನಗಳು ನುಚ್ಚು ನೂರಾದವು. ಅಂಥ ಕುಲವು ನಾಶಕ್ಕೆ ಅಣಿಯಾಗಿತ್ತು. ದುರದೃಷ್ಟದಿಂದ ಭೀಷ್ಮನಿಗೆ ಈ ಪಾಪ ಮಾಡಬೇಕಾಯಿತು. ಭೀಷ್ಮನು ತನಗಾಗಿ ಯಾವುದನ್ನೂ ಮಾಡಲಿಲ್ಲ. ರಾಜ್ಯದ ಮತ್ತು ಸ್ರ್ತೀಸಂಗದ ತ್ಯಾಗ ಮಾಡುತ್ತಲೇ ಆತನಿಗೆ ಸ್ವಂತದ ಕರ್ತವ್ಯಗಳೇ ಉಳಿದಿರಲಿಲ್ಲ. (ಪುಟ-28 ) ಮಹಾಭಾರತ ಬಹಳ ಮುಖ್ಯವಾಗಿ ರಾಜ್ಯದ ಉತ್ತರಾಧಿಕಾರತ್ವದ ವ್ಯಾಜ್ಯವನ್ನು ವ್ಯಾಖ್ಯಾನಿಸುತ್ತದೆ. ಈ ವ್ಯಾಜ್ಯ ಗಂಡಿನದೇ ಆಗಿರುವುದರಿಂದ ಇಲ್ಲಿನ ಹೆಣ್ಣುಗಳು, ಒಂದು ಕಡೆ ಗಂಡಿನ ರಾಜ್ಯಾಧಿಕಾರದ ಆಸೆಯಿಂದ ನರಳಿದರೆ, ಮತ್ತೊಂದು ಕಡೆಯಲ್ಲಿ ಗಂಡು ಹೆಣ್ಣುಗಳ ಸಂಬಂಧಗಳಲ್ಲಿನ ಯಾತನೆಯು ಅವರ ಪಾಲಿನದೇ ಆಗಿದೆ. ರಾಜತ್ವದ ದರ್ಪ ಮತ್ತು ಪುರುಷತ್ವದ ದರ್ಪಗಳು ಏಕಕಾಲಕ್ಕೆ ಇವರ ಮೇಲೆ ಆಳ್ವಿಕೆಯನ್ನು ನಡೆಸಿವೆ. ‘ಕೃತಶತ್ರುಪಕ್ಷ ವಿನಾಶರನ್ನು’ ಪಡೆಯುವಲ್ಲಿ ಮತ್ತು ಆ ಮಕ್ಕಳು ನಡೆಸಿದ ವಿನಾಶವನ್ನು ನೋಡುವ ಪ್ರೇಕ್ಷಕರಾಗಿಯೇ ಅವರು ಉಳಿಯಬೇಕಾಯಿತು. ಇಂಥ ಮಕ್ಕಳನ್ನು ನಿಯೋಗದಿಂದ ಪಡೆದರೂ ಪಾಂಡು, ಧೃತರಾಷ್ಟ್ರ, ಭೀಷ್ಮ ಮೊದಳಾದವರಿಗೆಲ್ಲ ಶಾಸ್ತ್ರ ಸಮ್ಮತದ ಪರಿಹಾರ ದೊರೆಯಿತು. ಅದರಿಂದಲೇ ಉಸಿರಾಡಿದರು. ಆದರೆ ಹೆಣ್ಣಿನೊಂದಿಗಿನ ಸಂಬಂಧಗಳು ಅವರಿಗೆ ಮುಖ್ಯವಾಗಲಿಲ್ಲ. ಉತ್ತರಾಧಿಕಾರಕ್ಕೆ ಸಿಕ್ಕ ಪುತ್ರ ವೈಭವದಲ್ಲಿ ಇಲ್ಲಿನ ಹೆಣ್ಣುಗಳನ್ನು ಮರೆತರು. ಇದಕ್ಕೊಂದು ಚರಿತ್ರೆಯೇ ಇಲ್ಲಿ ದೊರೆಯುತ್ತದೆ. ಗಂಗೆಯನ್ನು ಮದುವೆಯಾದ ಶಂತ ಎಂಟನೇ ಮಗುವಾದ ದೇವವ್ರತನನ್ನು ಉಳಿಸಿಕೊಳ್ಳಲು ಶಾಪಿತಳಾದ ಗಂಗೆಯನ್ನು ಬಿಡುತ್ತಾನೆ. ವ್ಯಾಸನನ್ನು ಪಡೆದ ಪರಾಶರ ಮತ್ಸ್ಯಗಂಧಿನಿಯನ್ನು ತ್ಯಜಿಸುತ್ತಾನೆ. ಜೊತೆಗೆ ಕನ್ಯತ್ವವನ್ನು ಕರುಣಿಸುವ ದರ್ಪ ಸಹ ಪರಾಶರನಿಗಿದೆ. ಅಂದರೆ ಗಂಡಿನ ಒಪ್ಪಿತ ಮೌಲ್ಯಗಳು ಸ್ತ್ರೀಯನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವುದು ಧರ್ಮಬದ್ಧವಾಗಿಯೂ ಕಂಡಿದೆ. ಈ ಧರ್ಮಬದ್ಧತೆ ವಂಶ ಪರಂಪರೆಯ ಮುಂದುವರಿಕೆಯಲ್ಲಿ ಸೇರಿಕೊಂಡಿದೆ. ಆದ್ದರಿಂದಲೇ ಪಂಡುವಿನ ಅನುಜ್ಞೆಯ ಮೇರೆಗೆ ಕುಂತಿ, ಮಾದ್ರಿಯರು ಮಂತ್ರಗಳಿಂದ ಮಕ್ಕಳನ್ನು ಪಡೆಯಬೇಕಾಗುತ್ತದೆ. ಇಲ್ಲಿ ಯಾವ ಅನುಜ್ಞೆಯೂ ಇಲ್ಲದೆ ಕರ್ಣನ್ನು ಪಡೆದ ಕುಂತಿ ಕೊನೆಗೂ ಅಂತರ್ಮುಖ ಸಂಕಟದಲ್ಲೇ ನರಳುತ್ತಾಳೆ. ಕೊನೆಗೆ ಮಗನ ನಾಶವಾದ ನಂತರ ತನ್ನ ಸಂಕಟಗಳನ್ನು ಹೊರಹಾಕಬೇಕಾಗುತ್ತದೆ. ಪಾಂಡು ಸತ್ತ ಮೇಲೆ ಗಂಡು ಹೆಣ್ಣುಗಳ ನಡುವಿನ ಸಂಬಂಧಗಳು ಇಬ್ಭಾಗವಾಗುತ್ತದೆ. ಸುರಸತಿಯರಲ್ಲಿ ನೆರೆದ ಪಾಂಡುವಿನ ಚಿತೆಯೊಳಗೆ ಮಾದ್ರಿ ಬೆಂದರೆ ರಾಜ್ಯಾಧಿಕಾರಕ್ಕಾಗಿ ಮಕ್ಕಳ ಏಲಿಗೆಯನ್ನು ನೋಡುತ್ತ ಕುಂತಿ ಮತ್ತೊಂದು ಬಗೆಯಲ್ಲಿ ಬೇಯುತ್ತಾಳೆ. ಮುದಿ ಹಾರುವನ ತನಿಬೇಂಟೆಯ ಮೂಲಕ ತಮ್ಮ ಸಂಬಂಧಗಳ ಬೇರುಗೊಲೆಯಾದ ನೋವನ್ನು ಅವಳ ಬದುಕಿನುದ್ದಕ್ಕೂ ಅನುಭವಿಸಬೇಕಾಗುತ್ತದೆ. ಅಷ್ಟೇ ಅಲ್ಲ ಈ ಒತ್ತಡ ದ್ರೌಪದಿಗೂ ಮುಂದುವರೆಯುತ್ತದೆ. ಕುಮಾರವ್ಯಾಸ ಭಾರತದಲ್ಲಿ ಹೆಣ್ಣಿನ ಹುಟ್ಟಿನ ಸಂದರ್ಭ ವರ್ಣಿಸಲ್ಪಡುವುದು ದ್ರೌಪದಿಗೆ ಸಂಬಂಧಿಸಿ ಮಾತ್ರ. ‘ಕಾಮನ ಕೈದುವಾಗಿ ಮೂರು ಲೋಕದ ಮೋಹನ ಮಂತ್ರದೇವತೆಯಾಗಿ’ ಕವಿ ಇವಳ ಜನನ ಸಂದರ್ಭವನ್ನು ವರ್ಣಿಸುತ್ತಾನೆ. ಈ ಅಂಶ ಮುಂದಿನ ಆಕೆಯ ಸ್ವಯಂವರದ ಪುರುಷ ಪ್ರತಿಷ್ಠೆಯ ಹೋರಾಟಕ್ಕೆ ಮತ್ತು ಜಟಾಸುರ, ಜಯದ್ರಥ ಕೀಚಕರು ಅವಳ ಮೇಲೆ ಆಕ್ರಮಣ ನಡೆಸುವುದಕ್ಕೆ ಕಾರಣವಾಗುತ್ತದೆ. ಅಂಥ ಆಕ್ರಮಣದ ಸಂದರ್ಭದಲ್ಲಿ ಸಹ ಕವಿ ದ್ರೌಪದಿಯನ್ನು ‘ಕುಡಿತೆಗಂಗಳ ಚೆಲುವೆಯಾಗಿ, ಉಂಗುರವಿಡಿಯ ನಡುವಿನ ನೀರೆಯಾಗಿ, ಹಂಸಗಮನೆಯಾಗಿಯೇ ಚಿತ್ರಿಸುತ್ತಾನೆ. ಕೀಚಕನ ಆಕ್ರಮಣವನ್ನು ಗಂಡಂದಿರಲ್ಲಿ ಹೇಳಿಕೊಂಡಾಗ ‘ಕರ್ಮಫಲವಿದು ನಿನಗೆ ಮಾನಿನಿ’ ಎಂದೇ ಎಂದೇ ಧರ್ಮರಾಯ ಅವಳಿಗೆ ಹೇಳುತ್ತಾನೆ. ಅಲ್ಲದೇ ‘ಕ್ಷಮೆಯು ಅಖಿಳ ದೋಷಾಪಹಾರವು, ಶೌರ್ಯ, ಧರ್ಮದ ರೂಪು ನೆಲೆಗಳೇ ಆ ಕ್ಷಮೆಯು’ ಎಂದು ಅವಳಿಗೆ ಸಹನೆಯನ್ನು ಬೋಧಿಸುತ್ತಾನೆ. ಇಂಥ ಕ್ಷಮೆ ಇದ್ದಾಗ ಮಾತ್ರ ‘ಪತಿವ್ರತೆ ಪುಣ್ಯ ವಧು ನೀನು’ ಎಂದೂ ಹೇಳುತ್ತಾನೆ. ಇನ್ನೂ ಈ ದ್ರೌಪದಿಯನ್ನು ದ್ರುಪದ ಸಲಹಿದ್ದು ಪಾರ್ಥನಿಗೆ ರಾಣಿಯಾಗಲೆಂದೇ. ಸ್ವಯಂವರದ ಸಂದರ್ಭದಲ್ಲಿ ಅರ್ಜುನ ಕಾಣದೆ ಹೋದರೂ ‘ಅರ್ಜುನನೇ ಈ ಕುಮಾರಿಯ ರಮಣನೆಂದು ಅವನ ಮನದ ಸಂಕಲ್ಪವಾಗಿ ಉಮ್ಮಳಿಸುತ್ತಾನೆ. ಇಂಥ ಗ್ರಹಿಕೆಗಳಲ್ಲಿ ಪುರುಷ ಪ್ರಾಧಾನ್ಯತೆ ಕೆಲಸ ಮಾಡಿರುವುದನ್ನು ಗಮನಿಸಬಹುದು. ಮುಂದೆ ದ್ರೌಪದಿ ಅರ್ಜುನನ ಕೊರಳಿಗೆ ಮಾಲೆ ಯನ್ನು ಹಾಕಿದರೂ ಐದಯ ಜನ ಗಂಡಂದಿರ ಸತಿಯಾಗಿ ಬದುಕಬೇಕಾದ ಒತ್ತಡ ಈ ಗ್ರಹಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಇದನ್ನು ‘ಮಾತೃವಚನವಲಂಘ್ಯವಿದು ವಿಖ್ಯಾತ ಪದ್ಧತಿ ಲೋಕಯಾತ್ರಾಭೀತಿಯಲ್ಲಿ ಭಯವೇಕೆ ಧರ್ಮ ರಹಸ್ಯನಿಷ್ಟರಿಗೆ’ ಎಂದು ಐದು ಜನಕ್ಕೂ ಪತ್ನಿಯಾಗಿ ಒಪ್ಪಬೇಕಾದುದನ್ನು ಅರ್ಜುನ ಸಮರ್ಥಿಸಿಕೊಳ್ಳುತ್ತಾನೆ. ಐದು ಜನ ವೀರರ ಪತ್ನಿಯಾದರೂ ಪರ ಪುರುಷರ ಆಕ್ರಮಣಗಳಿಂದೇನೂ ದ್ರೌಪದಿ ಮುಕ್ತಳಾಗಿರಲಿಲ್ಲ. ಇಂಥ ಒತ್ತಡಗಳ ಸ್ಥಿತಿಯಲ್ಲಿ ಸಹ ಧರ್ಮರಾಯನ ಧರ್ಮ ಸೂಕ್ಮಗಳಿಗೆ ಅವಳು ಬಲಿಯಾಗಲೇಬೇಕಾಯಿತು. ‘ಒಡಲು ಬೀಳಲಿಮೇಣು ತಮ್ಮಂದಿರು ಅಡವಿಯಲಿ ಹಾಯಿಕ್ಕಿ ಹೋಗಲಿಮಡದಿ ಮುನಿಯಲಿ. ಸತ್ಯದ ನುಡಿಗೆ ಹಾದರವಿಲ್ಲದಂತಿರೆ ಇವರ ಆಗುಹೋಗಿನ ಗೊಡವೆ ನನಗಿಲ್ಲ…...’ ಎಂದು ನಿರ್ವೀರ್ಯ ಸಂಬಂಧಗಳ ವ್ಯಾಖ್ಯಾನಗಳಲ್ಲಿ ತನ್ನನ್ನು ವೈಭವೀಕರಿಸಿಕೊಳ್ಳುತ್ತಾನೆ. ಅದಕ್ಕಾಗಿಯೇ ಆಕೆಯನ್ನು ಒಂದು ವಸ್ತುವಿನಂತೆ ಜೂಜಿನಲ್ಲಿ ಪಣವಾಗಿಡುತ್ತಾನೆ. ದುಶ್ಯಾಸನನ ‘ವಾಮಾಂಗದಲಿ ಬಾಗಿದ ತನುಲತೆಯ ವರ ಸುದಲೆ…...’ಯಾಗಿ ಪುರುಷ ಪ್ರತಿಷ್ಠೆ ಅಹಂಗಳಿಗಾಗಿಯೇ ಮೀಸಲಾದ ದ್ಯೂತ ಸಭೆಗೆ ಆಕೆ ಬರಬೇಕಾಗುತ್ತದೆ. ಧರ್ಮರಾಯನು ಸೋತ ಸೋಲಿನಿಂದಾಗಿ ತನ್ನ ದಾಸತ್ವವನ್ನು ಒಪ್ಪಿಕೊಳ್ಳದ ದ್ರೌಪದಿ ‘ಸ್ರೀಮತವನು ) ಎಂದು ಪುರುಷ
ಡಾ. ಹೇಮಾವತಿ ಸಿ ಎಚ್ (Mon,) studied this question.